ಮಗನಿಗಾಗಿ ನಿತ್ಯಾ ಆಶ್ರಮದ ಮುಂದೆ ಪೋಷಕರ ಉಪವಾಸ
First Published: 02 Feb 2014 02:00:00 AM IST
ಕ.ಪ್ರ.ವಾರ್ತೆ ರಾಮನಗರ ಫೆ.1
ನಿತ್ಯಾನಂದ ರಗಳೆಗೆ ಕೊನೆಯಿಲ್ಲ. ನಿತ್ಯ ಒಂದಿಲ್ಲೊಂದು ವಿವಾದ ಸುತ್ತಿಕೊಳ್ಳುತ್ತಲೇ ಇರುವ ಸ್ವಘೋಷಿತ ದೇವಮಾನವನ ಮುಷ್ಟಿಯಿಂದ ಮಗನನ್ನು ಬಿಡಿಸಿಕೊಳ್ಳಲು ವೃದ್ಧ ದಂಪತಿ ನಿತ್ಯಾಶ್ರಮ ಬಿಡದಿ ಧ್ಯಾನಪೀಠದ ಎದುರು ಶನಿವಾರ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಅಮೆರಿಕ ಕಾರಾಗೃಹದಲ್ಲಿರುವ ವಿನಯ್ ಭಾರದ್ವಾಜ್ ಬಿಡುಗಡೆಗಾಗಿ ಆತನ ತಾಯಿ ಕಲಾವತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋದ ಬೆನ್ನಲ್ಲೇ ಇತ್ತ ಶಿವಮೊಗ್ಗದ ಮುನ್ನೂರು ಕೃಷ್ಣಮೂರ್ತಿ ಮತ್ತು ಜಯಂತಿ ದಂಪತಿ ತಮ್ಮ ಏಕೈಕ ಪುತ್ರ ಸಂತೋಷ್‌ಗಾಗಿ ಹಂಬಲಿಸಿ ಇಳಿ ವಯಸ್ಸಲ್ಲೂ ಹೋರಾಟಕ್ಕೆ ಇಳಿದಿದ್ದಾರೆ. ನಿತ್ಯಾ ಸಹವಾಸದಿಂದ ಮಗನನ್ನು ಬಿಡಿಸಿ, ತಮ್ಮೊಟ್ಟಿಗೆ ಕರೆದೊಯ್ಯಲು ಕೃಷ್ಣಮೂರ್ತಿ ಮತ್ತು ಜಯಂತಿ ದಂಪತಿ ಕಳೆದ ಮೂರು ವರ್ಷದಿಂದ ಕಾನೂನು ಸಹಿತ ನಾನಾ ರೀತಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಇದೀಗ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಪ್ರಾರಂಭಿಸಿದ್ದಾರೆ.
ಘೋಷಣೆ ಮುದ್ರಿತವಾದ ಫ್ಲೆಕ್ಸ್‌ನೊಂದಿಗೆ ಹೋರಾಟಕ್ಕೆ ಸಜ್ಜಾಗಿಯೇ ಬಿಡದಿಗೆ ಶನಿವಾರ ಮಧ್ಯಾಹ್ನ ಆಗಮಿಸಿದ ದಂಪತಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ಮುನ್ನ ಧ್ಯಾನಪೀಠದಲ್ಲಿದ್ದ ಪುತ್ರ ಸಂತೋಷ್‌ಗೆ ಫೋನಾಯಿಸಿದ್ದು, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಇಲ್ಲವಾದಾಗ ನಿರಶನಕ್ಕೆ ಚಾಲನೆ ನೀಡಿದ್ದಾರೆ.
ದಯವಿಟ್ಟು ನಮ್ಮ ಮಗನನ್ನು ನಮ್ಮೊಂದಿಗೆ ಕಳುಹಿಸಿ ಕೊಡಿ ನಿತ್ಯಾನಂದ ಸ್ವಾಮಿ. ಇಲ್ಲವೇ ನಮಗೆ ವಿಷ ಕೊಟ್ಟು ಸಾಯಿಸಿ. ಮಗನನ್ನು ಕಳುಹಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳುವಿರೋ ಅಥವಾ ವಿಷ ಕೊಟ್ಟು ಸಾಯಿಸಿ ಪಾಪ ಕಟ್ಟಿಕೊಳ್ಳುವಿರೋ ನೀವೇ ತೀರ್ಮಾನಿಸಿ ಎನ್ನುವ ಘೋಷಣೆ ಉಪವಾಸನಿರತ ದಂಪತಿ ಹಿಡಿದಿದ್ದ ಫ್ಲೆಕ್ಸ್‌ನಲ್ಲಿತ್ತು. ಮಗನಿಲ್ಲದೆ ನಾವು ಇಲ್ಲಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
http://www.kannadaprabha.com/top-
No comments:
Post a Comment